ಆದಿಬ್ರಹ್ಮಸಮಾಜಶಾಸ್ತ್ರ
ಹತ್ತೊಂಬತ್ತನೆಯ ಶತಮಾನದ ಆದಿಭಾಗದಲ್ಲೇ ಭಾರತದಲ್ಲಿ ಕಂಡುಬಂದ, ಸುಧಾರಣಾ ಮನಃಪ್ರವೃತ್ತಿಯಿಂದುದ್ಭವಿಸಿದ ಸಾಮಾಜಿಕ ಮತ್ತು ಧಾರ್ಮಿಕ ಚಳುವಳಿಗಳಲ್ಲಿ ಮುಖ್ಯವಾದುದು. ರಾಜಾರಾಮ ಮೋಹನರಾಯ್ ಮೂರ್ತಿಪೂಜೆಯನ್ನು ವಿರೋಧಿಸಿ ದೇವರೊಬ್ಬನೇ ಎಂಬ ನಂಬಿಕೆಯನ್ನು ತಳೆದಿದ್ದವರನ್ನೊಳಗೊಂಡ ಬ್ರಹ್ಮಸಭಾ ಸಂಸ್ಥೆಯನ್ನು ಸ್ಥಾಪಿಸಿದರು (1828). ಈ ಭಕ್ತ ಗೋಷ್ಠಿಗೆಂದು ಒಂದು ಮನೆ ಸಿದ್ಧವಾಯಿತು; ಯಾವ ಮತಾಚರಣೆಯ ಕಾರ್ಯವೂ ನಡೆಯಕೂಡದು ಎಂಬುದು ಆ ಸಭೆಯ ಕಟುನಿಯಮಗಳಲ್ಲೊಂದು. ಇದೇ ಬ್ರಹ್ಮಸಮಾಜದ ಉಗಮವೆಂದು ಅನೇಕರ ಭಾವನೆ. ಇದೇ ಕೊನೆಗೆ ಎರಡಾಗಿ ಒಡೆದಾಗ ಮೂಲ ಸಮಾಜಕ್ಕೆ ಆದಿಬ್ರಹ್ಮ ಸಮಾಜವೆಂದು ಹೆಸರಾಯಿತು. ಆದರೆ ರಾಜಾರಾಮ ಮೋಹನರಾಯ್ ತಾನು ಹಿಂದೂ ಎಂದು ಕೊನೆಯವರೆಗೂ ನಂಬಿದ್ದ; ವಾರಕ್ಕೊಂದು ಸಲ ನಡೆಯುತ್ತಿದ್ದ ಗೋಷ್ಠಿಯಲ್ಲಿ ನಿಷ್ಠಾವಂತ ಬ್ರಾಹ್ಮಣರಿಂದ ವೇದಪಠಣವಾಗುತ್ತಿತ್ತು; ಬ್ರಾಹ್ಮಣೇತರರಿಗೆ ಅವಕಾಶವೂ ಇರಲಿಲ್ಲ.

ರಾಮಮೋಹನರಾಯ್ ಇಂಗ್ಲೆಂಡಿಗೆ ಹೋಗಿ ಅಲ್ಲೇ ಕಾಲವಾದಮೇಲೆ ಈ ಸಭೆ ಕ್ಷೀಣಿಸಿತು. ಆದರೆ 1843ರಲ್ಲಿ ಈ ಸಭೆಗೆ ಸೇರಿದ ದೇವೇಂದ್ರನಾಥ ಠಾಕೂರ್ (ರವೀಂದ್ರನಾಥ್ ಠಾಕೂರರ ತಂದೆ) ಅದಕ್ಕೆ ನವಚೈತನ್ಯವನ್ನಿತ್ತ. ಅದಕ್ಕೊಂದು ವಿಧಿನಿಯಮ ರಚಿತವಾಯಿತು; ಖಚಿತವಾದ ದೀಕ್ಷಾಕ್ರಮ ಸಿದ್ಧವಾಯಿತು. ತತ್ತ್ವಬೋಧಿನೀಪತ್ರಿಕಾ ಎಂಬ ನಿಯತಕಾಲಿಕ ಪತ್ರಿಕೆಯೊಂದನ್ನು ಪ್ರಕಟಿಸಿ ಸಭೆಯ ಧ್ಯೇಯ ನಿಯಮಗಳನ್ನು ಸಾರ್ವಜನಿಕರಿಗೆ ತಿಳಿಸುವ ಏರ್ಪಾಡಾಯಿತು. ವೇದಗಳು ಅಪೌರುಷೇಯವಾಗಿ ಮಾನವನಿಗೆ ವ್ಯಕ್ತವಾದ ಜ್ಞಾನವೆಂದೂ ಅವೇ ಈ ಸಭೆಯ ಧರ್ಮನೀತಿಗೆ ತಳಹದಿಯೆಂದೂ ಸಾರಲಾಯಿತು. ಆದರೆ ಕೊಂಚಕಾಲದ ಮೇಲೆ ಅಕ್ಷಯಕುಮಾರ ದತ್ತ ಮತ್ತು ಅವನ ಯುವಕ ಅನುಯಾಯಿಗಳು ವೇದವೇ ಋಜುಮಾರ್ಗವೆಂಬ ವಿಷಯದಲ್ಲಿ ಅಸಮಾಧಾನ ತಾಳಿದರು. ಕೇಶವಚಂದ್ರಸೇನ ಈ ಸಮಾಜವನ್ನು ಸೇರಿದ ಮೇಲೆ (1857), ಅವನ ಅಸಾಧಾರಣ ವಾಕ್ಪಟುತ್ವ, ವೇಷಪೂರಿತ ಉತ್ಸಾಹಗಳಿಂದ ಬ್ರಹ್ಮಸಮಾಜ ಹೆಚ್ಚು ಜನಾನುರಾಗ ಪಡೆಯಿತು. ಮನುಷ್ಯ ಮಾಡಿದ ತಪ್ಪಿಗೆ ಅನುಗುಣವಾದ ಪರಿತಾಪ, ಅದಕ್ಕೆ ತಕ್ಕ ಪ್ರಾಯಶ್ಚಿತ್ತ ಇವು ಹೆಚ್ಚು ಪ್ರಾಮುಖ್ಯ ಪಡೆದವು. ಈ ಹೊಸ ಧರ್ಮ ಸರ್ವವ್ಯಾಪಿಯಾಗುವಂತೆ ಮಾಡಬೇಕೆಂಬ ಧರ್ಮಪ್ರಚಾರಕ ಶ್ರದ್ಧೆ ಸದಸ್ಯರಲ್ಲಿ ಬೆಳೆಯಿತು. ಇದರ ಫಲವಾಗಿ, 1865ರಲ್ಲಿ ಐವತ್ತಕ್ಕೂ ಹೆಚ್ಚು ಶಾಖೆಗಳೇರ್ಪಟ್ಟುವು.

ದೇವೇಂದ್ರನಾಥ್ ಠಾಕೂರ್ ಕೇಶವಚಂದ್ರಸೇನನ ಉತ್ಸಾಹ ಕಾರ್ಯತತ್ಪರತೆಗಳನ್ನು ಬಹುವಾಗಿ ಮೆಚ್ಚಿ ಅವನನ್ನು ಸಮಾಜದ ಕಾರ್ಯದರ್ಶಿಯನ್ನಾಗಿ ಮಾಡಿದ. ಮುಂದೆ ಅವನ ಮತ್ತು ಇತರ ಯುವಕ ಸದಸ್ಯರ ತೀವ್ರ ಪ್ರಗತಿಪರ ಧೋರಣೆ ಠಾಕೂರನಿಗೆ ಸರಿಬೀಳಲಿಲ್ಲ. ಈ ಯುವಕರು ಅಂತರಮತೀಯ ವಿವಾಹಗಳನ್ನೂ ವಿಧವಾವಿವಾಹಗಳನ್ನೂ ನಡೆಸಿದರು; ಜನಿವಾರ ತೊಟ್ಟು ಬ್ರಾಹ್ಮಣರು ಸಭೆಯಲ್ಲಿ ಮಾತನಾಡುವುದನ್ನು ನಿಷೇಧಿಸಿದರು. ಕೊನೆಗೆ ಕೇಶವಚಂದ್ರಸೇನ ಮತ್ತು ಅವನ ಅನುಯಾಯಿಗಳನ್ನು ಸಮಾಜದಿಂದ ತೆಗೆದು ಹಾಕಲಾಯಿತು. ಯುವಕ ತಂಡ ಹೆದರದೆ ತನ್ನದೇ ಆದ ಬ್ರಹ್ಮಸಮಾಜವನ್ನು ಸ್ಥಾಪಿಸಿತು. ದೇವರೊಬ್ಬನೇ, ಮೂರ್ತಿ ಪೂಜೆ ತಪ್ಪು ಎಂದು ದೃಢವಾಗಿ ನಂಬಿದರೂ ಹಿಂದೂ ಸಮಾಜದಿಂದ ಸಂಪೂರ್ಣವಾಗಿ ಸಿಡಿದು ಹೋಗಲು ಇಚ್ಛೆಯಿಲ್ಲದವರು ಮೂಲ ಬ್ರಹ್ಮಸಮಾಜದಲ್ಲೇ ಉಳಿದುಕೊಂಡರು. ಬ್ರಹ್ಮಸಮಾಜದಲ್ಲುದ್ಭವಿಸಿದ ಈ ಭಿನ್ನತೆ, ಬೌದ್ಧರಲ್ಲುಂಟಾದ ಹೀನಾಯಾನ ಮಹಾಯಾನ ಪಂಥಗಳ ಭಿನ್ನತೆಯಂತಿದೆ.    
											(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ